ಪ್ರಾಣಿವಿಜ್ಞಾನ

ಪ್ರಾಣಿಗಳ ವೈಜ್ಞಾನಿಕ ಅಧ್ಯಯನ (ಜೂóಆಲಜಿ). ಜೀವ ವಿಜ್ಞಾನದ ಒಂದು ವಿಭಾಗವಾದ ಇದರಲ್ಲಿ ಅಡಕಗೊಳ್ಳುವ ಅಂಶಗಳು ಇಂತಿವೆ. ಒಂದೊಂದೇ ಪ್ರಾಣಿಯ ಮತ್ತು ಅದರ ಘಟಕ ಅಂಗಗಳ (ಆಣವಿಕ ಹಂತದವರೆಗೆ ಸಹ) ಪರಿಶೀಲನೆ, ಇಡೀ ಪ್ರಾಣಿಸಮುದಾಯದ ಅಧ್ಯಯನ, ಪ್ರಾಣಿಗಳ ಪಾರಸ್ಪರಿಕ ಸಂಬಂಧ ಹಾಗೂ ಪ್ರಾಣಿ ಮತ್ತು ಸಸ್ಯಗಳು, ಪ್ರಾಣಿ ಮತ್ತು ನಿರ್ಜೀವ ಪರಿಸರಗಳ ಸಂಬಂಧಗಳ ಅಭ್ಯಾಸ. ಈ ಮೇಲಿನ ಅಂಶಗಳ ಅಭ್ಯಾಸದ ಹರವು ತುಂಬ ವಿಶಾಲವಾದ್ದರಿಂದ ಪ್ರಾಣಿವಿಜ್ಞಾನವನ್ನು ಹಲವಾರು ವಿಶೇಷ ವಿಭಾಗಗಳಾಗಿ ವಿಂಗಡಿಸುವುದು ಅನಿವಾರ್ಯವಾಗಿದೆ. ಆದರೂ ಜೀವಂತ ವಸ್ತುಗಳ ಸಮಕಾಲೀನ ಅಧ್ಯಯನದಲ್ಲಿ ಕಂಡುಬರುವ ಪರಿಕಲ್ಪನಾ ಏಕತೆ ಜೀವಿಗಳ ಭಿನ್ನತೆಗಿಂತ ಹೆಚ್ಚಾಗಿ ಅವುಗಳ ರಾಚನಿಕ ಮತ್ತು ಕ್ರಿಯಾತ್ಮಕ ಏಕತೆಗಳ ಮೇಲೆ ಹೆಚ್ಚು ಒತ್ತು ಕೊಟ್ಟಿದೆ.

ಪ್ರಸಕ್ತ ಲೇಖನದಲ್ಲಿ ಪ್ರಾಣಿವಿಜ್ಞಾನದ ಐತಿಹಾಸಿಕ ಹಿನ್ನೆಲೆಯನ್ನೂ ಅದರ ಉಪ ವಿಭಾಗಗಳ ಸ್ಥೂಲಪರಿಚಯವನ್ನೂ ಅಧ್ಯಯನದ ಕಾರ್ಯವಿಧಾನಗಳನ್ನೂ ವಿವರಿಸಲಾಗಿದೆ.

ಐತಿಹಾಸಿಕ ಹಿನ್ನೆಲೆ : ಪ್ರಾಣಿಗಳ ಮತ್ತು ಮಾನವನ ಸಂಬಂಧ ಅವನ ಹುಟ್ಟಿನಷ್ಟೇ ಪ್ರಾಚೀನವಾದ್ದು, ಏಕೆಂದರೆ ಆದಿಮಾನವನ ಆಹಾರ ಅಂತೆಯೇ ಪ್ರಧಾನ ಶತ್ರುಗಳು ಪ್ರಾಣಿಗಳೇ ಆಗಿದ್ದವು. ನಾಗರಿಕತೆಯ ಮಾನಕದಲ್ಲಿ ಮಾನವ ವಿಕಾಸಕೊಳ್ಳುತ್ತ ಬಂದಂತೆ ಪ್ರಾಣಿಗಳು ತನ್ನಂತೆಯೇ ಜೀವಿಗಳೆಂಬ ಅರಿವು ಅವನಲ್ಲಿ ಮೂಡಿತು. ಅವನ ಜನಪದ ಭಾವನೆಗಳಲ್ಲಿ ಪ್ರಾಣಿಗಳಿಗೂ ಸ್ಥಾನದೊರೆಯ ತೊಡಗಿತು. ಕ್ರಮೇಣ ಅವನು ಪ್ರಾಣಿಗಳ ಸಾಕಣೆಯನ್ನೂ ಕೈಗೊಂಡನಾಗಿ ಅವುಗಳ ಜೀವನಕ್ರಮದ ಬಗ್ಗೆ ವ್ಯವಸ್ಥಿತ ಮತ್ತು ಸಂತುಲಿತ ದೃಷ್ಟಿ ಬೆಳೆಸಿಕೊಂಡ.

ಆದಿಮಾನವನ ಕಾಲದಿಂದ ಹೀಗೆ ಆರಂಭಗೊಂಡ ಪ್ರಾಣಿಗಳ ಬಗೆಗಿನ ಕುತೂಹಲ ಪ್ರಾಚೀನ ಗ್ರೀಕರ ಕಾಲಕ್ಕೆ ವಿಚಾರಪೂರ್ಣ ಅಧ್ಯಯನವಾಗಿ ರೂಪುಗೊಂಡಿತು. ಗ್ರೀಕ್ ತತ್ತ್ವಜ್ಞಾನಿ ಅರಿಸ್ಟಾಟಲ್ (ಕ್ರಿಪೂ 384-322) ಪ್ರಾಣಿಗಳ ಕುರಿತಾದ ತನ್ನ ಸವಿಸ್ತಾರ ವಿವರಣೆಗಳ ಮೂಲಕ ಅವುಗಳ ವೈಜ್ಞಾನಿಕ ಅಭ್ಯಾಸಕ್ಕೆ ಅಡಿಪಾಯ ಹಾಕಿದ.

ರೋಮ್ ದೇಶದ ಪ್ಲಿನಿ (ಕ್ರಿಶ 23-79) ತನ್ನ ಕಾಲದವರೆಗಿನ ಜ್ಞಾನವನ್ನೆಲ್ಲ ಕುರಿತಂತೆ 37 ಸಂಪುಟಗಳ ಬೃಹತ್ ಸಂಹಿತೆಯೊಂದನ್ನು (ಹಿಸ್ಟೋರಿಯ ನ್ಯಾಚುರ್ಯಾಲಿಸ್) ರಚಿಸಿದ. ಆಕಾಶಕಾಯಗಳಿಂದ ಹಿಡಿದು ಭೂಗೋಳ, ಸಸ್ಯಪ್ರಾಣಿ, ಲೋಹಶಿಲೆಗಳವರೆಗಿನ ವಿವಿಧ ವಸ್ತು ವಿಚಾರಗಳನ್ನು ಒಳಗೊಂಡಿದ್ದ ಈ ಸಂಪುಟಗಳು ಪೈಕಿ 7ರಿಂದ 11ನೆಯ ಸಂಪುಟಗಳು ಪ್ರಾಣಿ ವೃತ್ತಾಂತಕ್ಕೆ ಮೀಸಲಾಗಿವೆ. ಮೆಡಿಟರೇನಿಯನ್ ಪ್ರದೇಶದಲ್ಲಿ ಅರಿಸ್ಟಾಟಲ್ ಸಂಪ್ರದಾಯದಲ್ಲೇ ಪ್ರಾಣಿಗಳ ಅಧ್ಯಯನ ಹಲವರು ಶತಕಗಳ ಕಾಲ ಸಾಗಿಬಂತು. ಆದರೆ ಮಧ್ಯಯುಗದ ವೇಳೆಗೆ ಯೂರೊಪಿನಲ್ಲಿ ಪ್ರಾಣಿಗಳನ್ನು ಕುರಿತ ಜ್ಞೇಯ ವಿಷಯದ ಸುತ್ತ ಜನಪದ ನಂಬಿಕೆಗಳು, ಮೂಢಕಲ್ಪನೆಗಳು, ನೀತಿ ವಿಚಾರಗಳು ಮುಂತಾದವು ಹೆಣೆದುಕೊಂಡು ಪ್ರಾಣಿ ಅಧ್ಯಯನ ಅವೈಜ್ಞಾನಿಕವಾಗತೊಡಗಿತ್ತು. ಕ್ರಮೇಣ ಪ್ರಕೃತಿವಿಜ್ಞಾನಿಗಳು ಹೆಚ್ಚು ವಿಚಾರಪೂರ್ಣವಾಗಿ ಈ ವಿಷಯವನ್ನು ಪರಿಶೀಲಿಸತೊಡಗಿದರು. ಅಂತೆಯೇ ಯೂರೊಪಿನ ಪ್ರಾಣಿಜೀವನವನ್ನು ಪ್ರತ್ಯಕ್ಷವಾಗಿ ಅಧ್ಯಯಿಸಿ ಅದನ್ನು ಪ್ರಾಚೀನ ಗ್ರಂಥಗಳಲ್ಲಿಯ ವಿವರಣೆಗಳೋಂದಿಗೆ ಹೋಲಿಸಿ ನೋಡುವುದರ ಮೂಲಕ ಪ್ರಾಣಿಗಳ ಬಗೆಗಿನ ತಪ್ಪುಕಲ್ಪನೆಗಳನ್ನು ಸೋಸಿ ತೆಗೆಯುವಲ್ಲಿ ವಿಜ್ಞಾನಿಗಳು ನಿರತರಾದರು. 15ನೆಯ ಶತಮಾನದಲ್ಲಿ ಆವಿಷ್ಕಾರಗೊಂಡ ಮುದ್ರಣಯಂತ್ರದ ಬಳಕೆಯಿಂದ ಜ್ಞಾನದ ಪ್ರಸಾರ ಸುಲಭವಾಯಿತು. ಅಲ್ಲದೆ, ಜೀವ ಪ್ರಕ್ರಿಯೆಗಳನ್ನು ಯಾಂತ್ರಿಕ ದೃಷ್ಟಿಕೋನದಿಂದ ನೋಡುವ ಕ್ರಮವೂ (ಕಾರ್ಯ ಕಾರಣ ಸಂಬಂಧಗಳನ್ನು ಅವಲಂಬಿಸಿದ ಭೌತ ಪ್ರಕ್ರಿಯೆಗಳನ್ನು ಪ್ರಾಣಿರೂಪಗಳಿಗೂ ಅನ್ವಯಿಸಬಹುದೆಂಬುದು) ಪ್ರಾಣಿಗಳ ಶಾರೀರಕ ಕ್ರಿಯೆಗಳ ವಿಶ್ಲೇಷಣೆಗೆ ಉಪಯುಕ್ತ ವಿಧಾನವೆನಿಸತೊಡಗಿತು. ಉದಾಹರಣೆಗೆ ಬ್ರಿಟಿಷ್ ವೈದ್ಯ ವಿಲಿಯಮ್ ಹಾರ್ವೆ (1578-1657) ರಕ್ತಪರಿಚಲನೆಯನ್ನು ವಿವರಿಸುವಾಗ ತನ್ನ ವಾದದ ಬೆಂಬಲಕ್ಕೆ ಚರದ್ರವಾತ್ಮಕ ವ್ಯವಸ್ಥೆಯ ಕ್ರಿಯಾವಿನ್ಯಾಸಗಳನ್ನು ಬಳಸಿಕೊಂಡ. 18ನೆಯ ಶತಮಾನದ ವೇಳೆಗೆ ಪ್ರಾಣಿವಿಜ್ಞಾನದ ಅಧ್ಯಯನದಲ್ಲಿ ಕ್ಯಾರೊಲಸ್ ಲಿನೀಯಸನ (1707-78) ನಾಮಕರಣ ವಿಧಾನ, ಫ್ರೆಂಚ್ ನಿಸರ್ಗವಿಜ್ಞಾನಿ ಜಾರ್ಜ್ ಲೂಯಿ ಲಕ್ಲರ್ಕ್ ಡ ಬಫೋನ (1707-88) ಪ್ರಾಕೃತಿಕ ಇತಿಹಾಸದ ಕೃತಿಗಳು ಹಾಗೂ ಚಾರ್ಜ್ ಕ್ಯೂವಿಯೇನ (1769-1832) ತೌಲನಿಕ ಅಂಗರಚನಾಶಾಸ್ತ್ರದ ಮಹತ್ತರ ಕೊಡುಗೆಗಳು-ಇವು ಅಳವಡಿಕೆಯಾದವು. ಪಚನ, ಉಸಿರಾಟ, ವಿಸರ್ಜನೆ ಮುಂತಾದ ಶಾರೀರಕ್ರಿಯೆಗಳ ಅಧ್ಯಯನವೂ ನಡೆದು ಪ್ರಾಣಿವಿಜ್ಞಾನದ ಕ್ಷೇತ್ರ ವಿಸ್ತಾರವಾಗತೊಡಗಿತು.

1839ರಲ್ಲಿ ಜರ್ಮನ್ ವಿಜ್ಞಾನಿಗಳಾದ ಮಥೈಯಾಸ್ ಶ್ಲೈಡೆನ್ ಮತ್ತು ತೀಯೊಡೊರ್ ಶ್ವಾನ್ ಎಂಬುವರು ತಮ್ಮ ಜೀವಕೋಶ ಸಿದ್ಧಾಂತದ ಮೂಲಕ ಎಲ್ಲ ಜೀವಿಗಳ ರಾಚನಿಕ ಘಟಕ ಜೀವಕೋಶ (ಸೆಲ್) ಎಂಬುದನ್ನು ಪ್ರತಿಪಾದಿಸಿದ ಅನಂತರ ಪ್ರಾಣಿವಿಜ್ಞಾನಕ್ಕೆ ಹೊಸ ಆಯಾಮ ದೊರಕಿತು. ಈ ಮಧ್ಯೆ ರಸಾಯನ ವಿಜ್ಞಾನ ಬೆಳೆಯುತ್ತ ಬಂತು; ಜೀವಂತ ವ್ಯವಸ್ಥೆಗಳ ಅಭ್ಯಾಸಕ್ಕೂ ಇದನ್ನು ಬಳಸತೊಡಗಿದರು. 19ನೆಯ ಶತಮಾನದ ಮಧ್ಯಭಾಗದಲ್ಲಿ ಫ್ರೆಂಚ್ ವೈದ್ಯ ಹಾಗೂ ಶರೀರವಿಜ್ಞಾನಿ ಕ್ಲಾಡ್ ಬರ್ನಾರ್ಡ್ (1813-1878) ಜೀವಕೋಶ ಸಿದ್ಧಾಂತ ಹಾಗೂ ರಸಾಯನಜ್ಞಾನವನ್ನು ಅಳವಡಿಸಿಕೊಂಡು ದೇಹಾಂತರಪರಿಸರದ ಪರಿಕಲ್ಪನೆಯನ್ನು (ಹೋಮೀಯೋಸ್ಟೇಸಿಸ್) ಪ್ರತಿಪಾದಿಸಿದ.
ಜೀವಕೋಶ ಪರಿಕಲ್ಪನೆಯಿಂದ ಪ್ರಭಾವಿತಗೊಂಡ ಜೀವವಿಜ್ಞಾನದ ಹಲವಾರು ಪ್ರಕಾರಗಳ ಪೈಕಿ ಭ್ರೂಣವಿಜ್ಞಾನವೂ ಒಂದು. ನಿಷೇಚಿತ ಅಂಡವೊಂದು ಹೊಸ ಜೀವಿಯಾಗಿ ಪ್ರವರ್ಧಿಸುವ ವಿಧಾನವನ್ನು ನಿರ್ಧರಿಸುವಲ್ಲಿ ಜೀವಕೋಶಗಳ ಪಾತ್ರ ಮುಖ್ಯ ಎಂಬುದು ಭ್ರೂಣಶಾಸ್ತ್ರದ ಅಧ್ಯಯನದಿಂದ ವ್ಯಕ್ತವಾಗುತ್ತದಷ್ಟೆ. ಸ್ತನಿಗಳ ಅಂಡಾಶಯದ ಒಳಗೆ ಇರುವ ಅಂಡವನ್ನು ಮೊತ್ತಮೊದಲಬಾರಿಗೆ ಪರಿಶೀಲಿಸಿದ ಜರ್ಮನ್ ಭ್ರೂಣವಿಜ್ಞಾನಿ ಕಾರ್ಲ್ ಫಾನ್ ಬೇರ್ ಭ್ರೂಣದ ಬೆಳೆವಣಿಗೆಯ ವಿವಿಧ ಹಂತಗಳನ್ನು ವೈಜ್ಞಾನಿಕವಾಗಿ ವಿವರಿಸಿದ. ಇನ್ನೊಬ್ಬ ಭ್ರೂಣವಿಜ್ಞಾನಿ ಕ್ರಿಶ್ಚಿಯನ್ ಹೈನ್ರಿಕ್ ಪ್ಯಾಂಡರ್ ಮೂಲಧಾರ ಅಂಗಾಂಶ ಪದರಗಳ (ಜರ್ಮ್‍ಟಿಶ್ಯೂ) ಪರಿಕಲ್ಪನೆಯನ್ನು ಒದಗಿಸಿದ.

19ನೆಯ ಶತಮಾನದ ಉತ್ತರಾರ್ಧದಲ್ಲಿ ಸೂಕ್ಷ್ಮದರ್ಶಕಗಳ ವಿನ್ಯಾಸದಲ್ಲಿ ಪ್ರಗತಿ ಸಾಧಿಸಲಾಯಿತಲ್ಲದೆ ಹೀಮಟಾಕ್ಸಿಲಿನ್ ಮುಂತಾದ ಅನಿಲಿನ್ ವರ್ಣದ್ರವ್ಯಗಳ ಬಳಕೆಯಿಂದ ಕೋಶಗಳ ಒಳಗಿನ ರಚನೆಯನ್ನು ಹೆಚ್ಚು ಸ್ಪಷ್ಟವಾಗಿ ಅಧ್ಯಯಿಸಲು ಸಾಧ್ಯವಾಯಿತು.

ಈ ವೇಳೆಗೆ ಬ್ರಿಟಿಷ್ ಪ್ರಕೃತಿವಿಜ್ಞಾನಿ ಚಾಲ್ರ್ಸ್ ಡಾರ್ವಿನ್ (1809-82) ಆಳವಾದ ಅಧ್ಯಯನದ ಫಲವಾಗಿ ಈಗ ಸುಪ್ರಸಿದ್ಧವಾಗಿರುವ ವಿಕಾಸ ಸಿದ್ಧಾಂತವನ್ನು (ನೈಸರ್ಗಿಕ ಆಯ್ಕೆಯ ಮೂಲಕ ಜೀವಿಗಳು ನಿರಂತರ ಬದಲಾವಣೆಗೆ ಒಳಗಾಗುವುವು) ಪ್ರತಿಪಾದಿಸಿದ. ಇದರಿಂದ ಜೀವವಿಜ್ಞಾನದಲ್ಲಿ ಮಹತ್ತರ ಕ್ರಾಂತಿಯೇ ಉಂಟಾಯಿತು. ಅದುವರೆಗೆ ಇದ್ದ ನಂಬಿಕೆಯನ್ನು-ಎಲ್ಲ ಪ್ರಭೇದಗಳೂ ಒಮ್ಮೆಗೇ ವಿಶೇಷವಾಗಿ ಸೃಷ್ಟಿಯಾಗಿವೆ-ಇದು ಬುಡಮೇಲು ಮಾಡಿತಲ್ಲದೆ ಲಿನೀಯಸನ ಪರಿಕಲ್ಪನೆಯಾದ ಪ್ರಭೇದ ಪ್ರರೂಪವಾದವನ್ನೂ ಸುಳ್ಳು ಮಾಡಿತು. ಅಸ್ಟ್ರಿಯದ ಸನ್ಯಾಸಿ ಗ್ರೆಗರ್ ಮಂಡಲನ (1822-84) ತಳಿವಿಜ್ಞಾನ ಸಿದ್ಧಾಂತಗಳು ಡಾರ್ವಿನ್ನನಿಗೆ ಅಜ್ಞಾತವಾಗಿಯೇ ಉಳಿದವಾದರೂ ವಿಕಾಸದ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳಲು ಅನುವಂಶೀಕತೆಯ ತತ್ತ್ವಗಳು ಅತಿಮುಖ್ಯವೆಂಬ ಅಂಶವನ್ನು ಡಾರ್ವಿನ್ ಪರಿಭಾವಿಸಿಕೊಂಡಿದ್ದ.

ಮಂಡಲನ ತತ್ತ್ವಗಳ ಪುನರಾವಿಷ್ಕಾರದ (1900) ತರುವಾಯ ತಳಿವಿಜ್ಞಾನ ತುಂಬ ಮಹತ್ತ್ವದ ಶಾಸ್ತ್ರವಾಗಿ ಬೆಳೆದು ಬಂದು ಇಂದು ಜೀವವಿಜ್ಞಾನದ ಹಲವಾರು ವಿಭಿನ್ನ ಪ್ರಕಾರಗಳ ಅಧ್ಯಯನಕ್ಕೆ ಬಲು ಅಗತ್ಯವೆನಿಸಿದೆ. ಆಧುನಿಕ ಜೀವವಿಜ್ಞಾನದ ಮಹತ್ತರ ಸಾಧನೆಯೆಂದರೆ ಜೀನ್ ಆವಿಷ್ಕಾರ. ಎಲ್ಲ ಜೀವಿಗಳ ಅನುವಂಶಿಕ ನಿಯಂತ್ರಣ ಘಟಕವೇ ಇದು ಎಂಬ ಅಂಶದ ಅರಿವಿನಿಂದಾಗಿ ಜೀನಿಗೆ ವಿಶೇಷಸ್ಥಾನ ಲಭಿಸಿದೆ. ಜೀವಿಗಳು ಮತ್ತು ಅವುಗಳ ಪರಿಸರದ ನಡುವಣ ಅಂತರವ್ಯಾಪಾರಗಳ ಬಗೆಗಿನ ಅಭ್ಯಾಸದ ಫಲವಾಗಿ ಹೆಚ್ಚು ಸ್ಪಷ್ಟ ಚಿತ್ರಲಭಿಸಿರುವುದು ಜೀವನವಿಜ್ಞಾನದ ಇನ್ನೊಂದು ಮುಖ್ಯ ಸಾಧನೆ. ಇಂಥ ಪರಿಸರೀಯ ಅಧ್ಯಯನಗಳಿಂದಾಗಿ ಜೀವಿಗಳ ಮೂರು ಪ್ರಧಾನ ಗುಂಪುಗಳ (ಉತ್ಪಾದಕಗಳಾದ ಸಸ್ಯಗಳು, ಅನುಭೋಗಿಗಳಾದ ಪ್ರಾಣಿಗಳು ಹಾಗೂ ಅಪಘಟನಕಾರಿಗಳಾದ ಬ್ಯಾಕ್ಟೀರಿಯಗಳು) ಪರಸ್ಪರಾವಲಂಬನೆಯ ಬಗ್ಗೆ ಹೆಚ್ಚಿನ ಅರಿವು ಮೂಡಿದೆಯಲ್ಲದೆ ಮಾನವ ತನ್ನ ಪರಿಸರವನ್ನು ಹೇಗೆ ನಿಯಂತ್ರಿಸಬಹುದು ಹಾಗೂ ತನ್ಮೂಲಕ ಭೂಮಿಯ ಮೇಲೆ ತನ್ನ ಉಳಿವನ್ನು ಹೀಗೆ ನಿಯಂತ್ರಿಸಬಹುದು ಎಂಬವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿದೆ. ಪ್ರಾಣಿಗಳ ಸ್ವಭಾವ ನಡತೆಯ ಅಧ್ಯಯನವೂ (ಈತಾಲಜಿ) ಪ್ರಾಣಿ ವಿಜ್ಞಾನದ ಮುಖ್ಯ ಪ್ರಕಾರವಾಗಿ ಬೆಳೆದುಬಂದಿದೆ. ಪರಿಸರಶಾಸ್ತ್ರ, ಶರೀರ ಕ್ರಿಯಾಶಾಸ್ತ್ರ ತಳಿಶಾಸ್ತ್ರ, ಅಭಿವರ್ಧನೆ, ವಿಕಾಸ ಮುಂತಾದವುಗಳ ಒಟ್ಟು ಗೂಡುವಿಕೆಯ ಫಲವಾಗಿ ಪ್ರಾಣಿಗಳ ನಡತೆಯ ಅರ್ಥಪೂರ್ಣ ಅಧ್ಯಯನ ಸಾಧ್ಯವಾಗಿದ್ದು ಜೀವಪ್ರಪಂಚದಲ್ಲಿ ಮಾನವನ ಸ್ಥಾನವನ್ನು ಗೊತ್ತುಪಡಿಸುವುದೂ ಆತ ತನ್ನ ಪೂರ್ವಜಪ್ರಾಣಿಗಳಿಂದ ಹೇಗೆ ವಿಕಾಸಗೊಂಡಿದ್ದಾನೆಂಬ ಬಗ್ಗೆ ಅರಿಯುವುದೂ ಸುಲಭವಾಗಿದೆ.

ಇವೆಲ್ಲವುಗಳ ಫಲವಾಗಿ ಅಭಿಜಾತ ಪ್ರಾಣಿವಿಜ್ಞಾನ (ಕ್ಲಾಸಿಕಲ್ ಜೂಅಲಜಿ) ಇಂದು ಪ್ರಾಣಿಜೀವವಿಜ್ಞಾನವಾಗಿ (ಆ್ಯನಿಮಲ್ ಬಯಾಲಜಿ) ಬದಲಾಗಿದೆ. ಇದರಿಂದ ಅಭಿಜಾತ ಪ್ರಾಣಿವಿಜ್ಞಾನದ ಮೇಲೆ ಎರಡು ರೀತಿಯ ಪರಿಣಾಮಗಳುಂಟಾಗಿವೆ:

ಒಂದನೆಯದಾಗಿ, ವಿಜ್ಞಾನಾಧ್ಯಯನದ ವಿಶಿಷ್ಟ ಪ್ರಕಾರವಾಗಿ ಅಭಿಜಾತ ಪ್ರಾಣಿವಿಜ್ಞಾನಕ್ಕಿದ್ದ ಸ್ಥಾನ ಪಲ್ಲಟವಾಗಿದೆ. ಹಿಂದೆ ಪ್ರಾಣಿವಿಜ್ಞಾನಿಗಳು ಎಂದು ನಿರ್ದೇಶಿಸಲಾಗುತ್ತಿದ್ದ ವಿಜ್ಞಾನಿಗಳನ್ನು ಇಂದು ಸಸ್ಯಗಳ ಬದಲು ಪ್ರಾಣಿಗಳನ್ನು ಆಯ್ದುಕೊಂಡು ಅಧ್ಯಯಿಸುವ ಪ್ರಾಣಿತಳಿಶಾಸ್ತ್ರಜ್ಞರು. ಪ್ರಾಣಿಪರಿಸರಶಾಸ್ತ್ರಜ್ಞರು, ಪ್ರಾಣಿಶರೀರಕ್ರಿಯಶಾಸ್ತ್ರಜ್ಞರು ಎಂದು ಕರೆಯಲಾಗುತ್ತಿದೆ. ಇಂಥವರ ಅಧ್ಯಯನಗಳಲ್ಲಿ ಪ್ರಾಣಿಗಳಿಗೆ ಪ್ರಾಯೋಗಿಕ ವಸ್ತುವಾಗಿ ಮಾತ್ರ ಹಿರಿಮೆ; ಇಲ್ಲಿ ಒತ್ತು ಇರುವುದು ಜೀವವಿಜ್ಞಾನದ ಸಾರ್ವತ್ರಿಕ ಸಮಸ್ಯೆಗಳ ಪರಿಹಾರಕ್ಕೇ ವಿನಾ ಆಯ್ದುಕೊಂಡಿರುವ ಪ್ರಾಣಿಗಳಿಗಲ್ಲ.

ಎರಡನೆಯದಾಗಿ ಜೀವವಿಜ್ಞಾನಿಗಳ ಬಗ್ಗೆ ಪರಿಕಲ್ಪನಾತ್ಮಕ ದೃಷ್ಟಿ ಬೆಳೆಸಿಕೊಳ್ಳುವುದದರ ಬಗ್ಗೆ ಒಲವು ಹೆಚ್ಚಾಗಿದೆ. 19ನೆಯ ಶತಮಾನದ ಉತ್ತರಾರ್ಧ ಹಾಗೂ 20ನೆಯ ಶತಮಾನದ ಪೂರ್ವಾರ್ಧಗಳಲ್ಲಿ ಮೂಡಿಬಂದ ಪರಿಕಲ್ಪನೆಗಳ ಫಲವಾಗಿ (ಜೀವಕೋಶ ಸಿದ್ಧಾಂತ, ಪ್ರಾಕೃತಿಕ ಆಯ್ಕೆ ಮತ್ತು ವಿಕಾಸ, ಎಲ್ಲ ಜೀವಿಗಳಲ್ಲಿಯ ಅನುವಂಶಿಕ ವಸ್ತುವಿನಲ್ಲಿರುವ ಮೂಲ ಸಾದೃಶ್ಯ, ಪರಿಸರ ವ್ಯವಸ್ಥೆಗಳ ಮೂಲಕ ವಸ್ತು ಮತ್ತು ಶಕ್ತಿಯ ಹರಿವು) ಈ ದೃಷ್ಟಿ ಬೆಳೆದಿದೆ. ಸೂಕ್ಷ್ಮಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳ ಜೀವನವೃತ್ತಾಂತವನ್ನು ಹಿಂದಿನ ಕಾಲದಲ್ಲಿಯಂತೆ ಸೀಮಿತ ಅನುಭವಾತ್ಮಕ ವಿಧಾನಗಳ ಬದಲು ಸೈದ್ಧಾಂತಿಕ ಪ್ರತಿರೂಪಗಳನ್ನು ಬಳಸಿಕೊಂಡು ಅಭ್ಯಸಿಸುವುದು ರೂಢಿಗೆ ಬಂದಿದೆ. ಜೀವ ವಿಜ್ಞಾನ ಮತ್ತು ರಸಾಯನವಿಜ್ಞಾನಗಳನ್ನು ಮೇಳೈಸಿಕೊಂಡು ಮಾಡುವಂಥ ಆಣವಿಕ ಅಧ್ಯಯನಗಳ ವಿಷಯದಲ್ಲಿ ಈ ದೃಷ್ಟಿ ಸಾಧುವಾದ್ದು. ಜೀವಂತ ವ್ಯವಸ್ಥೆಗಳ ವಿಶ್ಲೇಷಣೆಗೆ ಭೌತವಿಜ್ಞಾನಗಳ ತಂತ್ರವಿಧಾನಗಳನ್ನೂ ಪರಿಮಾಣಾತ್ಮಕ ಪ್ರಾಧಾನ್ಯವನ್ನೂ ಪರಿಣಾಮಕಾರಿಯಾಗಿ ಬಳಸುವುದು ಸಾಧ್ಯ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಪ್ರಾಣಿವಿಜ್ಞಾನದ ಉಪವಿಭಾಗಗಳ ಪರಿಚಯ: ಮೇಲೆ ಹೇಳಿದಂತೆ ಪ್ರಾಣಿವಿಜ್ಞಾನವನ್ನು ಉಪವಿಭಾಗಗಳಾಗಿ ವಿಂಗಡಿಸದೆ ಇಡಿಯಾಗಿ ಪರಿಗಣಿಸುವುದೇ ಇಂದಿನ ದೃಷ್ಟಿಯಾಗಿದೆಯಾದರೂ ಒಂದು ಅರ್ಥದಲ್ಲಿ ಇದನ್ನು ಹಲವಾರು ಪ್ರಕಾರಗಳಾಗಿ ವಿಭಾಗಿಸುವುದು ಉಪಯುಕ್ತವೆನ್ನಬಹುದು. ಇಂಥ ಉಪವಿಭಾಗಗಳಲ್ಲಿ ಮುಖ್ಯವಾದವು ಇಂತಿವೆ : ಅಂಗಾಂಶಶಾಸ್ತ್ರ, ಬಾಹ್ಯರೂಪರಚನಾಶಾಸ್ತ್ರ, ಜೀವಕೋಶಶಾಸ್ತ್ರ, ಆಣವಿಕ ಜೀವ ವಿಜ್ಞಾನ, ಭ್ರೂಣಶಾಸ್ತ್ರ, ಪರಿಸರಶಾಸ್ತ್ರ, ತಳಿಶಾಸ್ತ್ರ, ಶರೀರಕ್ರಿಯಾಶಾಸ್ತ್ರ, ವರ್ಗೀಕರಣ, ಪ್ರಾಣಿಸ್ವಭಾವಶಾಸ್ತ್ರ.
ಪ್ರಾಣಿಗಳ ಬಾಹ್ಯರೂಪದ ಹಾಗೂ ಅಂಗಾಂಶಗಳ ಅಧ್ಯಯನವೇ ಬಾಹ್ಯರೂಪ ರಚನಾಶಾಸ್ತ್ರ (ಮಾರ್ಫಾಲಜಿ) ಮತ್ತು ಅಂಗಾಂಶಶಾಸ್ತ್ರ (ಅನಾಟಮಿ) ಪ್ರಾಣಿಗಳ ವ್ಯವಸ್ಥಿತ ಅಧ್ಯಯನವನ್ನು ಕುರಿತಂತೆ ಲಭ್ಯವಾಗಿರುವ ಮೊದಲ ವಿವರಗಳು ಈ ಎರಡು ಉಪವಿಭಾಗಗಳಲ್ಲಿ ಅಡಕಗೊಂಡಿವೆ. ಅರಿಸ್ಟಾಟಲನೇ ಈ ದಿಸೆಯಲ್ಲಿ ಕೆಲಸ ಮಾಡಿದವರಲ್ಲಿ ಮೊದಲಿಗ. ಆತ ಪ್ರಾಣಿಗಳನ್ನು ಸಂಗ್ರಹಿಸುವುದರಲ್ಲಿಯೂ ಛೇದಿಸಿ ಅಭ್ಯಸಿಸುವಲ್ಲಿಯೂ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದ. ವಿವಿಧ ಪ್ರಾಣಿಗಳ ರಾಚನಿಕ ಸಂಕೀರ್ಣತೆಯಲ್ಲಿ ವೈವಿಧ್ಯವನ್ನು ಕಂಡುಕೊಂಡು ಜೀವನ ಕ್ರಮ, ಸ್ವಭಾವ ಮತ್ತು ದೈಹಿಕ ಅಂಗಗಳಲ್ಲಿ ವ್ಯತ್ಯಾಸ ಗಮನಿಸಿದ ಆತ ಪ್ರಾಣಿಗಳನ್ನು ಅತ್ಯಂತ ಸರಳ ರೀತಿಯಿಂದ ಹಿಡಿದು ಅತ್ಯಂತ ಕ್ಲಿಷ್ಟ ರೀತಿಯವರೆಗೆ ಏರುಶ್ರೇಣಿಯಲ್ಲಿ ವ್ಯವಸ್ಥೆಗೊಳಿಸಿದ. ಹೀಗೆ ಅರಿಸ್ಟಾಟಲ್ ಪ್ರಾಣಿಗಳ ವ್ಯವಸ್ಥಿತ ವರ್ಗೀಕರಣಕ್ಕೂ ಅಡಿಪಾಯ ಹಾಕಿದ.

ಅರಿಸ್ಟಾಟಲನ ಅನಂತರದ ದಿನಗಳಲ್ಲಿ ಮೆಡಿಟರೇನಿಯನ್ ಪ್ರದೇಶದ ಅಲೆಕ್ಸಾಂಡ್ರಿಯ ಪ್ರಾಣಿವಿಜ್ಞಾನಾಧ್ಯಯನದ ಕೇಂದ್ರವಾಯಿತು. ಅಂಗಾಂಶಶಾಸ್ತ್ರ ಅದರಲ್ಲೂ ಕೇಂದ್ರೀಯ ನರಮಂಡಲದ ಅಭ್ಯಾಸ ಈ ಅಧ್ಯಯನದ ಮುಖ್ಯ ವಿಷಯವಾಗಿತ್ತು. 2ನೆಯ ಶತಮಾನದಲ್ಲಿ ಅಲೆಕ್ಸಾಂಡ್ರಿಯದಲ್ಲಿ ಅಂಗಾಂಶಶಾಸ್ತ್ರವನ್ನು ಅಭ್ಯಸಿಸಿದ ಗ್ರೀಕ್ ವಿಜ್ಞಾನಿ ಗೇಲೆನ (ಸು. 130-ಸು 200) ಪ್ರಾಣಿಗಳನ್ನು ಕತ್ತರಿಸಿ ನೋಡಿ ಅಂಗಾಂಶಗಳ ಮತ್ತು ಅಂಗಗಳ ಒಳರಚನೆಯ ಅಭ್ಯಾಸ ನಡೆಸಿದ. 16ನೆಯ ಶತಮಾನದ ಅಂಡ್ರಿಯಾಸ್ ವೆಸೇಲಿಯಸ್ಸನ (1514-1564) ವೈದ್ಯಕೀಯ ಅಧ್ಯಯನಗಳು ಗೇಲೆನ್ನನ ಅಧ್ಯಯನಗಳ ಜಾಡಿನಲ್ಲೇ ಇದ್ದುವಾಗಿ ತೌಲನಿಕ ಅಂಗ ರಚನಾಶಾಸ್ತ್ರಕ್ಕೆ ಪ್ರಚೋದನೆಯಿತ್ತವು. ಬಹುಕಾಲದವರೆಗೆ ಅಂಗರಚನಾಶಾಸ್ತ್ರ ಬರಿಯ ವಿವರಣಾತ್ಮಕ ವಿಷಯವಾಗಿಯೇ ಉಳಿಯಿತಾದರೂ ಬಫೋ ಹಾಗೂ ಕ್ಯೂವಿಯೇ-ಇವರ ಅಭ್ಯಾಸಗಳ ಫಲವಾಗಿ ಅಂಗರಚನೆಗೂ ಅದರ ಕ್ರಿಯೆಗೂ ಇರುವ ಸಂಬಂಧ ಸ್ಪಷ್ಟವಾಗತೊಡಗಿತು.

19ನೆಯ ಶತಮಾನದ ಬ್ರಿಟಿಷ್ ಅಂಗರಚನಾಶಾಸ್ತ್ರಜ್ಞ ರಿಚರ್ಡ್ ಓವೆನ್ ಸಮಜಾತತೆ (ಹೋಮಾಲಜಿ) ಮತ್ತು ಸಮವೃತ್ತಿ (ಅನಾಲಜಿ) ಪರಿಕಲ್ಪನೆಯನ್ನು ಪ್ರತಿಪಾದಿಸಿದ. ಜರ್ಮನಿಯ ತೌಲನಿಕ ಅಂಗರಚನಾಶಾಸ್ತ್ರಜ್ಞ ಕಾರ್ಲ್‍ಗೀಗೆನ್ ಬಾವರನ ಅಭ್ಯಾಸಗಳ ಮೇಲೆ ಆಧರಿತವಾಗಿದ್ದ ಈ ಪರಿಕಲ್ಪನೆಗಳು ಜೀವವೈಕಾಸಿಕ ಬದಲಾವಣೆಗಳ ಪರವಾದ ಮುಖ್ಯ ಪುರಾವೆ ಒದಗಿಸಿದವು. ಹೀಗೆ ಪ್ರಾಣಿ ವರ್ಗೀಕರಣಕ್ಕೆ ಅಷ್ಟಿಷ್ಟು ಮಾಹಿತಿ ಒದಗಿಸುತ್ತ ಬರಿಯ ವಿವರಣಾತ್ಮಕ ಶಾಸ್ತ್ರವಾಗಿದ್ದು ಗೌಣಸ್ಥಾನದಲ್ಲಿದ್ದ ಅಂಗರಚನಾಶಾಸ್ತ್ರ 19ನೆಯ ಶತಮಾನದ ವೇಳೆಗೆ ಶರೀರಕ್ರಿಯೆಯೊಂದಿಗೆ ಸಮ್ಮಿಳನಗೊಂಡು ವಿಕಾಸದ ಪರಿಕಲ್ಪನೆಗೆ ಪುರಾವೆ ಪೂರೈಕೆ ಮಾಡುವ ಪ್ರಾಮುಖ್ಯ ಗಳಿಸಿಕೊಂಡಿತು.

ವರ್ಗೀಕರಣ : ವಿಭಿನ್ನತರದ ಜೀವಿಗಳಿಗೆ ಒಂದು ವ್ಯವಸ್ಥಿತ ವರ್ಗೀಕರಣ ಸಂಸ್ಕಾರವನ್ನು ಒದಗಿಸಿದಾತ ಸ್ವೀಡನ್ನಿನ ಸಸ್ಯವಿಜ್ಞಾನಿ ಕ್ಯಾರೊಲಸ್ ಲಿನೀಯಸ್. ಸಮಜಾತತೆಯ ಸಂಬಂಧಗಳ ಆಧಾರದ ಮೇಲೆ ಯಾವುದೋ ಒಂದು ಸಾಮಾನ್ಯ ಪೂರ್ವಜಪ್ರಾಣಿ ಗುಂಪಿನಿಂದ ಎಲ್ಲ ಪ್ರಾಣಿಗಳೂ ವಿಕಸಿಸಿವೆ. ಎಂದು ಪ್ರತಿಪಾದಿಸುತ್ತ ಪ್ರಾಣಿ ಪ್ರಭೇದಗಳ ವ್ಯವಸ್ಥೆಯ ನೈಸರ್ಗಿಕ ವಿಧಾನವನ್ನು ರೂಪಿಸುವ ಪ್ರಯತ್ನ ಈತನದು. ಆದರೆ ಪ್ರಭೇದವೆಂದರೆ ಯಾವುದೋ ಒಂದು ವಿಶಿಷ್ಟ ಮಾದರಿ ಎಂದು ಈತ ಬಗೆದದ್ದರಿಂದ ಈತನ ವರ್ಗೀಕರಣ ವ್ಯವಸ್ಥೆ ಒಂದು ಆದರ್ಶೀಕೃತ ಬಾಹ್ಯರೂಪರಚನಾಶಾಸ್ತ್ರದ ವಿಧಿನಿರ್ಬಂಧಗಳನ್ನು ಹೆಚ್ಚು ಹೋಲುತ್ತಿತ್ತು.

ಲಿನೀಯಸ್ ಸಾಧಿಸಿದ ಮಹತ್ತರ ಹಾಗೂ ಕ್ರಾಂತಿಕಾರಕ ಪ್ರಗತಿ ವರ್ಗೀಕರಣದ ನಾಮಕರಣ ಕ್ಷೇತ್ರದಲ್ಲಿ. ದ್ವಿಪದನಾಮಕರಣ ಪದ್ಧತಿಯನ್ನು ಮೊತ್ತಮೊದಲಿಗೆ ಪ್ರತಿಪಾದಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಪ್ರತಿ ಪ್ರಭೇದಕ್ಕೂ ಶಾಸ್ತ್ರೀಯವಾಗಿ ಲ್ಯಾಟಿನ್ ಭಾಷೆಯ ಹೆಸರು ಇರತಕ್ಕದ್ದು, ಹೆಸರಿನಲ್ಲಿ ಎರಡು ಪದಗಳು ಜಾತಿ ನಿರ್ದೇಶಕ (ಜೆನರಿಕ್) ಮತ್ತು ಪ್ರಭೇದ ನಿರ್ದೇಶಕ (ಸ್ಪೆಸಿಫಿಕ್) ಇರತಕ್ಕದ್ದು ಎಂಬುದನ್ನು ಈತ ವಿಧಿಸಿದ. ಉದಾಹರಣೆಗೆ ನಾಯಿಯ ಶಾಸ್ತ್ರೀಯ ಹೆಸರು ಕೇನಿಸ್ ಫೆಮಿಲಿಯಾರಿಸ್. ಇಲ್ಲಿ ಕೇನಿಸ್ ನಾಯಿಯ ಜಾತಿಯನ್ನೂ ಫೆಮಿಲಿಯಾರಿಸ್ ಪ್ರಭೇದವನ್ನೂ ನಿರ್ದೇಶಿಸುವುದು. ಪ್ರಭೇದ ಮತ್ತು ಜಾತಿ-ಈ ಎರಡು ದರ್ಜೆಗಳ ಜೊತೆಗೆ ಬೇರೆ ವಿಭಾಗೀಯ ದರ್ಜೆಗಳನ್ನೂ (ಗಣ, ವರ್ಗ, ರಾಜ್ಯ) ಈತ ಮಾನ್ಯಮಾಡಿದ್ದ. ಅನಂತರ ಈ ಯಾದಿಗೆ ಕುಟುಂಬ, ವಿಭಾಗಗಳು ಸೇರ್ಪಡೆಯಾದುವು. ಲಿನೀಯಸ್ಸನ ಮಹದ್ಗ್ರಂಥ ಸಿಸ್ಟೆಮ ನೇಚುರೆ ಅವನ ಜೀವಿತಕಾಲದಲ್ಲಿ 12 ಆವೃತ್ತಿಗಳನ್ನೂ ಆತನ ಮರಣಾನಂತರ 13ನೆಯ ಆವೃತ್ತಿಯನ್ನೂ ಕಂಡಿತು. ತರುವಾಯದ ದಿನಗಳಲ್ಲಿ ಲಿನೀಯಸ್ಸನ ವರ್ಗೀಕರಣ ವ್ಯವಸ್ಥೆ ಹಲವಾರು ವಿಧಗಳಲ್ಲಿ ವಿಸ್ತಾರಗೊಂಡು ಬದಲಾಗಿದೆಯಾದರೂ ಆತ ಬಳಸಿದ ಶೈಲಿ ಮತ್ತು ವಿಧಾನಗಳು ಇಂದಿಗೂ ಮಾದರಿಯಾಗಿವೆ.

20ನೆಯ ಶತಕದ ಪ್ರಾರಂಭದಲ್ಲಿ ನವಜಾತ ವರ್ಗೀಕರಣ ವ್ಯವಸ್ಥೆ (ನ್ಯೂಸಿಸ್ಟಮ್ಯಾಟಿಕ್ಸ್) ಜಾರಿಗೆ ಬಂದಿದ್ದು ಇದರ ಪ್ರಕಾರ ಯಾವುದೇ ವರ್ಗೀಕರಣದಲ್ಲಿ ಆಯಾಪ್ರಾಣಿಯ (ಪ್ರಭೇದದ) ವಿಕಾಸೇತಿಹಾಸ ಪ್ರತಿಫಲನಗೊಳ್ಳುವಂತಿರಬೇಕು. ವರ್ಗೀಕರಣದ ಮೂಲ ಘಟಕವಾದ ಪ್ರಭೇದ (ಸ್ಪೀಶೀಸ್) ವಿಕಾಸದ ಮೂಲ ಘಟಕವೂ ಹೌದು ಎಂಬುದು ಇದರ ಸಾರಾಂಶ. ಅಂದರೆ ಪ್ರಭೇದವೆಂದರೆ ವಾಸ್ತವಿಕವಾಗಿ ಇಲ್ಲವೆ ವಿಭವಾತ್ಮಕವಾಗಿ ಅಂತರಸಂಕರಕ್ಕೆ ಒಳಗಾಗುವ ಸಂದಣಿಯ ಘಟಕ. ಅಂತರಸಂಕರದ ಮೂಲಕ ಒಂದು ಸಂದಣಿ ತನ್ನ ಅನುವಂಶಿಕವಸ್ತುವಿನ ಆಕರಸಾಮಗ್ರಿಯನ್ನು ಹಂಚಿಕೊಳ್ಳುತ್ತದೆ. ತನ್ಮೂಲಕ ಅನುವಂಶಿಕ ವಸ್ತುವಿನ ಸಂಗ್ರಹಾಗಾರವನ್ನೇ ನಿರ್ಮಿಸಿಕೊಳ್ಳುತ್ತದೆ.

ಶರೀರಕ್ರಿಯ ವಿಜ್ಞಾನ: ಪ್ರಾಣಿವಿಜ್ಞಾನದ ಮುಖ್ಯಶಾಖೆಗಳಲ್ಲ್ಲೊಂದಾದ ಇದು ಪ್ರಾಣಿಗಳ ಅಂತೆಯೇ ಮಾನವನ ದೇಹದೊಳಗೆ ನಡೆಯುವ ಉಪಾಪಚಯ ಕ್ರಿಯೆಗಳನ್ನು ಕುರಿತಾಗಿದೆ. 17 ನೆಯ ಶತಮಾನದಿಂದ ಆರಂಭಗೊಂಡ ವಿಭಾಗ ದಿನದಿನಕ್ಕೂ ವಿಸ್ತಾರಗೊಳ್ಳುತ್ತ ಬಂದಿದೆ. ರಕ್ತಪರಿಚಲನೆಯನ್ನು ವಿಲಿಯಮ್ ಹಾರ್ವೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟಂದಿನಿಂದ ಪ್ರಾಣಿಗಳ ಬಗ್ಗೆಯೂ ಪ್ರಯೋಗಗಳು ನಡೆಯುತ್ತ ಬಂದಿದ್ದು ತೌಲನಿಕ ಶರೀರಕ್ರಿಯಾ ವಿಜ್ಞಾನ ರೂಪುತಳೆದಿದೆ. ಈ ಶಾಖೆಯ ಆರಂಭದಲ್ಲಿ ಕಾಣಬರುವ ಮುಖ್ಯ ಮೈಲಿಗಲ್ಲುಗಳೆಂದರೆ ಸ್ವಿಸ್ ಶರೀರಕ್ರಿಯಾ ವಿಜ್ಞಾನಿ ಅಲ್‍ಬ್ರೆಕ್ಟ್ ಫಾನ್ ಹಾಲರ್ ಪ್ರಕಟಿಸಿದ ಎಲೆ ಮೆಂಟ್ಸ್ ಆಫ್ ಹ್ಯೂಮನ್ ಫಿಸಿಯಾಲಜಿ (ಎಲೆಮೆಂಟ ಫಿಸಿಯಾಲಾಜಿಯ ಕಾರ್ಪೊರಿಸ್ ಹ್ಯೂಮನೈ) ಎಂಬ ಎಂಟು ಸಂಪುಟಗಳ ಗ್ರಂಥ. 18ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರಾನ್ಸಿನ ರಸಾಯನವಿಜ್ಞಾನಿ ಅಂಟಾಯ್ನ್ ಲವಾಸೀಯೇ (1743-94) ಉಸಿರಾಟವನ್ನು ಕುರಿತು ನಡೆಸಿದ ಮಹತ್ತರ ಪ್ರಯೋಗ. ಉಸಿರಾಟ ಒಂದು ಬಗೆಯ ದಹನಕ್ರಿಯೆ ಎಂಬುದು ಇದರಿಂಧ ಸ್ಪಷ್ಟವಾಯಿತಲ್ಲದೆ ರಸಾಯನ ವಿಜ್ಞಾನವನ್ನು ಶರೀರಕ್ರಿಯಾವಿಜ್ಞಾನದೊಂದಿಗೆ ಬೆಸೆಯಲು ಸಹಕಾರಿಯಾಯಿತು ಕೂಡ. ದೇಹದ ಅಂತಃಪರಿಸರದ ಸ್ಥಿರತೆಯ ಪರಿಕಲ್ಪನೆಯನ್ನು ಕ್ಲಾಡ್ ಬರ್ನಾರ್ಡ್ (1813-78) ರೂಪಿಸಿದ ಅನಂತರ ಶರೀರಕ್ರಿಯೆಯ ತತ್ತ್ವಗಳಿಗೆ ಹೊಸ ದೃಷ್ಟಿ ಲಭಿಸಿತು. ಜರ್ಮನಿಯ ಪ್ರಾಣಿಶಾಸ್ತ್ರಜ್ಞ ಯೋಹಾನೆಸ್ ಮ್ಯೂಲರ್ ಪ್ರಾಣಿಗಳ ಅಂಗರಚನೆ ಹಾಗೂ ಶರೀರಕ್ರಿಯೆಗಳ ತೌಲನಿಕ ಅಧ್ಯಯನ ನಡೆಸಿದ. ಜಸ್ಟಸ್ ಫಾನ್ ಲೀಬಿಗ್ ಮತ್ತು ಕಾರ್ಲ್ ಲೂಡ್ ವಿಗ್ ಎಂಬುವರು ಶರೀರಕ್ರಿಯೆಗಳ ಸಮಸ್ಯೆಗಳ ಪರಿಹಾರಕ್ಕೆ ಅನುಕ್ರಮವಾಗಿ ರಾಸಾಯನಿಕ ಹಾಗೂ ಭೌತವಿಧಾನಗಳನ್ನು ಅನುಸರಿಸಿದರು. ಇದರಿಂದಾಗಿ ಶರೀರಕ್ರಿಯೆಗಳ ಅಭ್ಯಾಸಕ್ಕೆ ಹೊಸಹೊಸ ನಿಷ್ಕøಷ್ಟ ತಂತ್ರ ವಿಧಾನಗಳು ಲಭ್ಯವಾದುವು. ಸ್ನಾಯುಗಳ ಚಟುವಟಿಕೆಯನ್ನೂ ರಕ್ತದ ಒತ್ತಡವನ್ನೂ ಕರಾರುವಾಕ್ಕಾಗಿ ಅಳೆಯುವುದು ಮತ್ತು ದೇಹದೊಳಗಿನ ದ್ರವಗಳನ್ನು ರಾಸಾಯನಿಕವಾಗಿ ವಿಶ್ಲೇಷಿಸುವುದು ಇದರಿಂದ ಸಾಧ್ಯವಾಯಿತು.

ಈ ವೇಳೆಗೆ ಪ್ರಾಣಿದೇಹದ ವಿವಿಧ ಅಂಗಸಮೂಹಗಳ-ಪಚನವ್ಯವಸ್ಥೆ, ಸ್ನಾಯುಗಳ, ನರಗಳು, ಪ್ರಜನನ ಕಾರ್ಯಕ್ಕೆ ಸಂಬಂಧಿಸಿದಂಥವು. ಉಸಿರಾಟಕ್ಕೆ ಸಂಬಂಧಿಸಿದಂಥವು, ಕಂಕಾಲ, ಇತ್ಯಾದಿ-ರಾಚನಿಕ ಹಾಗೂ ಕ್ರಿಯಾತ್ಮಕ ಪರಿಚಯ ಆಗಿತ್ತು. ಈ ಅಂಗಸಮೂಹಗಳ ಕಾರ್ಯಶೀಲತೆಯನ್ನು ಕೋಶದ ಹಂತದಲ್ಲಿ ರಸಾಯನಿಕ ವಿಧಾನಗಳಲ್ಲಿ ಅರಿಯುವ ಪ್ರಯತ್ನ ಬೆಳೆಯತೊಡಗಿತು. ಇದರ ಫಲವಾಗಿ ಕೋಶಕ್ರಿಯಾ ವಿಜ್ಞಾನ (ಸೆಲ್ ಫಿಸಿಯಾಲಜಿ), ಶರೀರಕ್ರಿಯಾ ರಸಾಯನ ವಿಜ್ಞಾನ (ಫಿಸಿಯಲಾಜಿಕಲ್ ಕೆಮಿಸ್ಟ್ರಿ) ಮುಂತಾದ ವಿಶೇಷ ಉಪವಿಭಾಗಗಳು ರೂಪುಗೊಂಡಿವೆ. ಇಂಥ ಅಂಗಸಮೂಹಗಳ ಪೈಕಿ ನರಮಂಡಲವನ್ನು ಕುರಿತಂತೆ ವ್ಯಾಪಕವಾದ ಸಂಶೋಧನೆಗಳು ನಡೆದಿದ್ದು ಇದು ಉಳಿದೆಲ್ಲ ಅಂಗಸಮೂಹಗಳಿಗಿಂತ ಅತ್ಯಂತ ಸಂಕೀರ್ಣವಾದದ್ದೆಂದು ಗಮನ ಸೆಳೆದಿದೆ.

ಭ್ರೂಣ ವಿಜ್ಞಾನ ಅಥವಾ ಪರಿವರ್ಧನೆ : ಪ್ರಾಚೀನಕಾಲದಿಂದಲೂ ಜೀವಿಗಳ ಭ್ರೂಣದ ಬೆಳೆವಣಿಗೆ ಮತ್ತು ಅಂಗಗಳ ವಿಭೇದೀಕರಣ ಜೀವವ್ಶೆಜ್ಞಾನಿಕ ಸಮಸ್ಯೆಗಳಲ್ಲಿ ಪ್ರಮುಖವೆನಿಸಿವೆ. 17ನೆಯ ಶತಮಾನದ ಸುಮಾರಿನಲ್ಲಿ ಪ್ರಚಲಿತವಾಗಿದ್ದ ಭಾವನೆಯೆಂದರೆ ಭ್ರೂಣದ ಬೆಳೆವಣಿಗೆಯನ್ನು ಆರಂಭಿಸುವ ಸೂಕ್ಷ್ಮಗಾತ್ರದ ವಸ್ತುವಿನಲ್ಲಿ ಯಾವುದೇ ಪ್ರೌಢಜೀವಿ ಅತ್ಯಂತ ಕಿರುಗಾತ್ರದ ರೂಪದ ಜೀವಿಯಾಗಿ (ಹೋಮಂಕ್ಯುಲಸ್) ಸ್ಥಿತವಾಗಿರುತ್ತದೆ. ಎಂಬುದು ಆದರೆ ಪ್ರೌಢಜೀವಿಯ ಅಂಗಾಂಗಗಳು ರೂಪುಗೊಳ್ಳುವಾಗ ವಿಭೇದೀಕರಣಗೊಳ್ಳದೆ ಸಾಮಗ್ರಿಗಳು ಕಾಲಾನುಕ್ರಮದಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ವಿಶೇಷೀಕೃತಗೊಳ್ಳುವುವು ಎಂಬ ವಾದವನ್ನು ಜರ್ಮನ್‍ವೈದ್ಯ ಕ್ಯಾಸ್ಟರ್ ಫ್ರೀಡರಿಕ್ ವೂಲ್ಛ್ (1733-94) ಪ್ರಬಲವಾಗಿ ಪ್ರತಿಪಾದಿಸಿದ (1759). ಅನಂತರ ಫ್ರೆಂಚ್ ವೈದ್ಯ ಮೇರಿ ಫ್ರಾಂಕಾಯ್ ಕ್ಸೇವಿಯರ್ ಬಿಜಾಟ್ ಭ್ರೂಣದ ಪರಿವರ್ಧನೆಯಲ್ಲಿ ವಿಭೇದೀಕರಣಗೊಳ್ಳುವ ಭಾಗಗಳು ಊತಕಗಳೆಂಬ ವಿವಿಧ ಘಟಕಗಳನ್ನು ಪಡೆದಿರುವುವು ಎಂಬುದನ್ನು ವಿಶದಪಡಿಸಿದ (1801). ಭ್ರೂಣದ ಬೆಳೆವಣಿಗೆಯ ಮೊದಲ ಹಂತಗಳಲ್ಲೆಲ್ಲ ಮೂರು ಅತ್ಯಗತ್ಯ ಪದರಗಳು ಇರುವುವು ಎಂಬುದೂ ಇವುಗಳಿಂದ ಊತಕಯುಕ್ತ ವಿಶಿಷ್ಟ ಅಂಗಗಳು ರೂಪುಗೊಳ್ಳುತ್ತವೆ ಎಂಬುದು ಪತ್ತೆಯಾಯಿತು. 1828ರಲ್ಲಿ ಮೊತ್ತಮೊದಲ ಬಾರಿಗೆ ಸ್ತನಿಗಳ ಅಂಡವನ್ನು ಫಾನ್‍ಬೇರ್ ಎಂಬ ಜರ್ಮನ್ ವಿಜ್ಞಾನಿ ಕಂಡುಹಿಡಿದ.

ಭ್ರೂಣದ ಬೆಳೆವಣಿಗೆ, ಅಭಿವರ್ಧನೆ ಮತ್ತು ಅಂಗಾಂಗಗಳ ರೂಪುಗೊಳ್ಳುವಿಕೆಗೆ ಜೀವಕೋಶಿಯ ಸಂಯಂತ್ರಗಳು ಮುಖ್ಯ ಎಂಬ ಅಂಶ 19ನೆಯ ಶತಕದಲ್ಲಿ ಬೆಳಕಿಗೆ ಬಂತು. ಈ ವೇಳೆಗೆ ಅನುವಂಶಿಕತೆಯ ಕ್ರೋಮೊಸೋಮ್ ಸಿದ್ಧಾಂತ ರೂಪುಗೊಳ್ಳುವುದಕ್ಕಿಂತ ಮುಂಚೆಯೇ ಕೋಶದಿಂದ ಕೋಶಕ್ಕೆ ಕ್ರೋಮೊಸೋಮುಗಳು ಅನುವಂಶಿಕವಾಗಿ ಹರಿದು ಸಾಗುವುವು ಎಂಬುದನ್ನು ಜರ್ಮನ್ ವಿಜ್ಞಾನಿ ತೀಯೋಡರ್ ಬೊವೆರಿ ಸ್ಥಿರಪಡಿಸಿದ್ದ (1895). ಅಂದ ಮೇಲೆ ಯುಗ್ಮದಿಂದ (ನಿಷೇಚಿತ ಅಂಡ) ರೂಪುಗೊಳ್ಳುವ ಭ್ರೂಣದ ಎಲ್ಲ ಕೋಶಗಳಲ್ಲಿ ಇರುವ ಕ್ರೋಮೊಸೋಮುಗಳ ಪೈಕಿ ಅರ್ಧದಷ್ಟು ಕ್ರೋಮೊಸೋಮುಗಳು ಪಿತೃಕೋಶದಿಂದಲೂ ಉಳಿದ ಅರ್ಧದಷ್ಟು ಮಾತೃಕೋಶದಿಂದಲೂ ಬರುತ್ತವೆ ಎಂಬುದನ್ನು ಜೀವವಿಜ್ಞಾನಿಗಳು ಅರಿಯುವಂತಾಯಿತು. ಇದರ ಫಲವಾಗಿ ಮೂಡಿದ ಈತನಕ ನಿಗೂಢವಾಗಿದ್ದ ಸಮಸ್ಯೆ ಎಂದರೆ ದೇಹದ ಎಲ್ಲ ಕೋಶಗಳಿಗೂ ಒಂದೇ ತೆರನ ಕ್ರೋಮೊಸೋಮುಗಳು ದತ್ತಿಯಾಗಿ ಬಂದಿದ್ದರೂ ಕೋಶಗಳ ನಡುವಣ ವ್ಯತ್ಯಾಸಗಳಿಗೆ, ಕಾರಣಗಳೇನು, ವಿವಿಧ ಕೋಶಗಳು ಬೇರೆಬೇರೆ ಬಗೆಯ ಅಂಗಗಳಾಗಿ ರೂಪುಗೊಳ್ಳುವುದು ಹೇಗೆ ಎಂಬುದು. ಇತ್ತೀಚಿನ ಸಂಶೋಧನೆಗಳ ಫಲವಾಗಿ, ಇಂಥ ಕೋಶೀಯ ಮತ್ತು ಅಂಗಾಂಶೀಯ ವಿಭೇದೀಕರಣಕ್ಕೆ ಮುಖ್ಯ ಕಾರಣ ಜೀನುಗಳ ವಿಭಿನ್ನ ಚಟುವಟಿಕೆ ಎಂಬುದು ಗೊತ್ತಾಗಿದೆ.
ವಿಕಾಸ : ಪೀಳಿಗೆಯಿಂದ ಪೀಳಿಗೆಗೆ ಬದಲಾಗುತ್ತ ವಿಕಾಸದ ಹಾದಿಯಲ್ಲಿ ಜೀವಿಗಳು ಸಾಗುತ್ತವೆ ಎಂದು ಹೇಳಿದವರ ಪೈಕಿ ಚಾಲ್ರ್ಸ್ ಡಾರ್ವಿನ್ ಮೊದಲನೆಯವನಲ್ಲ. ಆದರೆ ಇಂಥ ಬದಲಾವಣೆಗಳು ಪೀಳಿಗೆಯಿಂದ ಪೀಳಿಗೆಗೆ ಸಂಗ್ರಹಗೊಳ್ಳುವ ಸಂಯಂತ್ರವನ್ನು ಪ್ರತಿಪಾದಿಸಿದ ಕೀರ್ತಿ ಈತನಿಗೆ ಸಲ್ಲಬೇಕು. ಜೀವಿಗಳಲ್ಲಿ ಅನುವಂಶಿಕ ವಿಚರಣೆಗಳು ಸದಾ ಉಂಟಾಗುತ್ತಿರುತ್ತವೆ ಎಂದೂ ಉಳಿವಿಗಾಗಿ ಜೀವಿಗಳು ನಡೆಸುವ ಸ್ಪರ್ಧೆಯಲ್ಲಿ ಬದಲಾದ ಪರಿಸರಕ್ಕೆ ಹೊಂದಿಕೊಳ್ಳುವ ವಿಚರಣೆಗಳನ್ನು ಪಡೆದಿರುವ ಜೀವಿಗಳು ಉಳಿಯುತ್ತವೆ ಎಂದೂ ಈತ ಅಭಿಪ್ರಾಯ ಪಟ್ಟ. ಇಂಥ ವಿಚರಣೆಗಳ ಸಂತತ ಸಂಗ್ರಹಣೆಯ ಫಲವಾಗಿ ಹೊಸ ಜೀವಿರೂಪಗಳು ಮೈದಳೆಯುವುವು. ಈ ಒಟ್ಟು ಪ್ರಕ್ರಿಯೆಯನ್ನು ಡಾರ್ವಿನ್ ನೈಸರ್ಗಿಕ ಅಯ್ಕೆ ಎಂದು ಕರೆದ.

ಡಾರ್ವಿನ್ನನಿಗಿಂತ ಹಿಂದಿನವರು, ಉದಾಹರಣೆಗೆ ಫ್ರೆಂಚ್ ಜೀವವಿಜ್ಞಾನಿ ಜ್ಯಾನ್ ಬ್ಯಾಪ್ಟಿಸ್ಟ್‍ಲಮಾರ್ಕ್ (1744-1829), ಪ್ರಭೇದಗಳ ವೈವಿಧ್ಯವನ್ನು ಒಪ್ಪಿಕೊಂಡಿದ್ದಕ್ಕಾದರೂ ಇಂಥ ವೈವಿಧ್ಯಕ್ಕೆ ಮೂಲ ಯಾವುದೋ ಒಂದು ಆದರ್ಶೀಕೃತ ಪರಿಪೂರ್ಣಗೊಳಿಸುವ ತತ್ತ್ವ ಎಂಬ ವಾದಕ್ಕೆ ಅಂಟಿಕೊಂಡಿದ್ದರು. ಲಮಾರ್ಕನವಾದ ಕಲ್ಪನಾತ್ಮಕ ರಂಜನೆಯಾಗಿದ್ದರೆ ಡಾರ್ವಿನ್ನನದು ವಸ್ತುನಿಷ್ಠ ವಿಶ್ಲೇಷಣೆಯಾಗಿತ್ತು. ಇದರಿಂದ ಸಹಜವಾಗಿಯೇ ಜೀವವೈಜ್ಞಾನಿಕ ಕ್ಷೇತ್ರದಲ್ಲಿ ಡಾರ್ವಿನ್ನನ ನೈಸರ್ಗಿಕ ಆಯ್ಕೆ ಸಿದ್ಧಾಂತ ಕ್ರಾಂತಿಯನ್ನೇ ಉಂಟುಮಾಡಿತು. ಡಾರ್ವಿನ್ನನ ಸಿದ್ಧಾಂತದ ಪ್ರಭಾವ ಎರಡು ತೆರನಾದುದು. ಒಂದು ಬಾಹ್ಯರೂಪರಚನಾವಿಜ್ಞಾನ, ಭ್ರೂಣವಿಜ್ಞಾನ ಮುಂತಾದ ಜೀವವಿಜ್ಞಾನದ ಹಲವಾರು ಕ್ಷೇತ್ರಗಳ ಗುಣಪುನರ್ವಿಮರ್ಶೆ, ಬ್ರಿಟನ್ನಿನ ಅಂಗ ರಚನಾ ವಿಜ್ಞಾನಿ ಓವನ್ನನ ತೌಲನಿಕ ಅಂಗರಚನಾ ವಿಕಾಸವಾದಕ್ಕೆ ಪುರಾವೆ ಒದಗಿಸುವ ಮಹತ್ತ್ವದ ಆಧಾರಶಿಲೆಯಾಯಿತು. ಹಾಗೆಯೇ ಪಳೆಯುಳಿಕೆಗಳ ಶೋಧ ಮುಂದುವರಿದಂತೆ, ಹೊಸ ಹೊಸ ಗತವಂಶಿ ಜೀವರೂಪಗಳ ಆವಿಷ್ಕಾರ ನಡೆಯುತ್ತ ಬಂದಂತೆ, ಹಾಗೂ ಪಳೆಯುಳಿಕೆಗಳಲ್ಲಿ ಗಮನಿಸಲಾದ ಅನುಕ್ರಮವಾದ ಬದಲಾವಣೆಗಳ ಅರಿವುಂಟಾದಂತೆ ವಿಕಾಸದ ಬಗ್ಗೆ ಹೆಚ್ಚು ನಂಬಿಕೆ ಮೂಡತೊಡಗಿತು. ಅಂತೆಯೇ ಜರ್ಮನಿಯ ಪ್ರಾಣಿವಿಜ್ಞಾನಿ ಎರ್ನ್‍ಸ್ಟ್ ಹೆಕೆಲ್ ಭ್ರೂಣದ ಬೆಳೆವಣಿಗೆಯ ಹಂತಗಳಲ್ಲಿ ಆ ನಿರ್ದಿಷ್ಟ ಜೀವಿಯ ವಿಕಾಸೇತಿಹಾಸವನ್ನು ಗುರುತಿಸಿ ಪ್ರತಿಯೊಂದು ಪ್ರಾಣಿಯ ಭ್ರೂಣೇತಿಹಾಸ ಅದರ ವಿಕಾಸೇತಿಹಾಸವನ್ನು ವ್ಯಕ್ತ ಪಡಿಸುತ್ತದೆ ಎಂಬ ವಾದವನ್ನು ಮುಂದಿಟ್ಟು ಭ್ರೂಣವಿಜ್ಞಾನವನ್ನು ವಿಕಾಸದ ಬೆಳಕಿನಲ್ಲಿ ಅಧ್ಯಯಿಸುವ ಕಾರ್ಯಕ್ಕೆ ಅಡಿಪಾಯ ಹಾಕಿದ.

ಡಾರ್ವಿನ್ ಸಿದ್ಧಾತದ ಇನ್ನೊಂದು ಪ್ರಭಾವ ತಳಿವಿಜ್ಞಾನ, ಮೆಂಡಲೀಯ ಅನುವಂಶಿಕತೆಯ ನಿಯಮಗಳ ವಿಶದೀಕರಣ ಹಾಗೂ ಜೀನ್ ಎಂಬುದು ಅನುವಂಶಿಕತೆಯ ಘಟಕ ಎಂಬ ಪರಿಕಲ್ಪನೆಗಳನ್ನು ಆಧರಿಸಿ ರೂಪುಗೊಂಡುದು. ಇದರಿಂದ ಅನುವಂಶಿಕ ವಿಚರಣೆಗಳು ಹೇಗೆ ಉತ್ಪತ್ತಿಯಾಗುವುವು, ಅವುಗಳ ಸ್ವಭಾವವೇನು ಎಂಬವನೂ ಇವುಗಳ ಮೇಲೆ ನೈಸರ್ಗಿಕ ಆಯ್ಕೆಯ ಕ್ರಿಯೆ ಯಾವ ತೆರನಾದುದು ಎಂಬುದನ್ನೂ ಹೆಚ್ಚು ಸ್ಪಷ್ಟ ಪಡಿಸಲು ಸಾಧ್ಯವಾಯಿತೆನ್ನಬಹುದು. ನಿಸರ್ಗದಲ್ಲಿ ಕಂಡುಬರುವ ಸಹಜ ಸಂದಣಿಗಳ ಸಂಕರವನ್ನು ಮತ್ತು ಅನುವಂಶಿಕತೆಯನ್ನು ಅರಿಯಲು ಇದು ಒಂದು ಸಾಧನವಾಯಿತು. ಇಂಥ ಅಧ್ಯಯನಗಳ ಫಲವಾಗಿ ಇಂದು ಸಂದಣಿ ತಳಿವಿಜ್ಞಾನ (ಪಾಪ್ಯುಲೇಷನ್ ಜೆನೆಟಿಕ್ಸ್) ರೂಪುಗೊಂಡಿದೆ. ಹಾಗೆಯೇ ಪ್ರಭೇದೀಕರಣ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸಲು ಸಾಧ್ಯವಾಗಿದೆ.

ತಳಿವಿಜ್ಞಾನ : ಮೆಂಡಲ್ ನಿಷ್ಕøಷ್ಟವಾಗಿ ವಿಶ್ಲೇಷಿಸಿದ ಕಾಲಕ್ಕೂ (1866) ಮುಂಚೆಯೇ ತಳೀಕರಣ, ಸಂಕರ, ಗುಣಗಳ ಅನುವಂಶಿಕತೆ ಮುಂತಾದ ವಿಚಾರಗಳು ಜಟಿಲ ಸಮಸ್ಯೆಗಳೆನಿಸಿಕೊಂಡಿದ್ದುವು. ಮೆಂಡಲನ ಪೂರ್ವಜ ವಿಜ್ಞಾನಿಗಳು ಪ್ರಾಣಿಗಳ ಗುಣಧರ್ಮಗಳು ರಕ್ತದ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತವೆ ಎಂದೂ, ಈ ಅನುವಂಶಿಕ ಗುಣಗಳಿಗೆ ಕಾರಣ ಹಲವಾರು ತೆರನ ರಸಧಾತುಗಳೆಂದೂ (ಹ್ಯೂಮರ್ಸ್) ಇಲ್ಲವೆ ಕೆಲವು ಅಸ್ಪಷ್ಟ ವಸ್ತುಗಳೆಂದೂ ನಂಬಿದ್ದರು. ಬಟಾಣಿ ಗಿಡದ ಏಳು ಜೊತೆ ಆಯ್ದ ಗುಣಲಕ್ಷಣಗಳನ್ನು ಅವು ಪೀಳಿಗೆಯಿಂದ ಪೀಳಿಗೆಗೆ ಸಾಗಿಹೋಗುವ ವಿಧಾನವನ್ನೂ ಎಚ್ಚರಿಕೆಯಿಂದ ಪ್ರಯೋಗಗಳ ಮೂಲಕ ಅಭ್ಯಾಸ ಮಾಡಿದ ಮೆಂಡಲ್ ಅನುವಂಶಿಕತೆಯ ಹಳೆಯ ಮಾದರಿಗಳನ್ನು ವಿಸ್ಥಾಪಿಸುವಲ್ಲಿ ಸಮರ್ಥನಾದ.

20ನೆಯ ಶತಕದ ಆದಿಯಲ್ಲಿ ತಳಿವಿಜ್ಞಾನಿ ಮತ್ತಷ್ಟು ಪ್ರಗತಿಹೊಂದಿತು. ಆನುವಂಶಿಕ ಕಾರಕಗಳು ಕ್ರೋಮೊಸೋಮಿನ ಮೇಲೆ ಸ್ಥಿರವಾಗಿರುತ್ತವೆಂದು ಪತ್ತೆ ಹಚ್ಚಲಾಯಿತು. ಇವೇ ಜೀನುಗಳು, ಅಮೆರಿಕದ ತಳಿವಿಜ್ಞಾನಿ ತಾಮಸ್ ಹಂಟ್ ಮಾರ್ಗನ್ ಹೆಣ್ಣುನೊಣ ಡ್ರೊಸಾಫಿಲದ ಮೇಲೆ ನಡೆಸಿದ ವ್ಯಾಪಕ ಸಂಶೋಧನೆಗಳ ಫಲವಾಗಿ ಪ್ರಾಣಿತಳಿವಿಜ್ಞಾನ ಪ್ರಾಮುಖ್ಯಕ್ಕೆ ಬಂತು. ಜೀನ್‍ಗಳು ಕ್ರೋಮೊಸೋಮುಗಳ ಮೇಲೆ ರೇಖೀಯಾಗಿ ಜೋಡಣೆಗೊಂಡಿವೆ. ಕ್ರೋಮೊಸೋಮ್ ಭಾಗಗಳು ಪರಸ್ಪರ ಬದಲುಗೊಳ್ಳುವುವು. ಗುಣಲಕ್ಷಣಗಳನ್ನು ನಿರ್ಧರಿಸುವಲ್ಲಿ ಜೀನ್‍ಗಳು ಅಂತರಕ್ರಿಯೆಗಳಿಗೆ ಒಳಗಾಗುವುವು ಎಂಬ ಮುಖ್ಯ ಪರಿಕಲ್ಪನೆಗಳು ರೂಪುಗೊಂಡದ್ದು ಮಾರ್ಗನ್ನನ ಸಂಶೋಧನೆಗಳಿಂದ ಮಾರ್ಗನ್ನನ ವಿದ್ಯಾರ್ಥಿ ಹರ್ಮನ್ ಮುಲರ್ ಎಂಬಾತ ಜೀನ್‍ರೂಪದಲ್ಲಿ ಬದಲಾವಣೆಗಳನ್ನು ಉಂಟುಮಾಡುವಂತೆ (ಜೀನ್‍ವ್ಯತ್ಯಯ) ಎಕ್ಸ್‍ಕಿರಣಗಳನ್ನು ಬಳಸಬಹುದೆಂದು ತೋರಿಸಿಕೊಟ್ಟು ವಿವರಣೆಗಳ (ವೈವಿಧ್ಯ-ವೇರಿಯೇಷನ್) ಅಧ್ಯಯನಕ್ಕೆ ಬುನಾದಿ ಹಾಕಿದ.

ಕೋಶೀಯ ಮತ್ತು ಆಣವಿಕ ಜೀವವಿಜ್ಞಾನ: 19ನೆಯ ಶತಮಾನದ ಆದಿಯಲ್ಲೇ ಜೀವದ ಮೂಲ ಘಟಕ ಜೀವಕೋಶ ಎಂಬುದನ್ನು ಗಮನಿಸಲಾಗಿದ್ದರೂ ಜೀವಕೋಶವನ್ನು ಕುರಿತು ಅತ್ಯಂತ ಮಹತ್ತ್ವದ ಸಂಶೋಧನೆಗಳು ನಡೆದಿರುವುದು 1940ರಿಂದೀಚೆಗೆ. ದೃಕ್ಸೂಕ್ಷ್ಮ ದರ್ಶಕಗಳನ್ನು ಅವಲಂಬಿಸಿದ್ದು ಪ್ರಧಾನವಾಗಿ ವಿವರಣಾತ್ಮಕ ವಿಷಯವಾಗಿದ್ದ ಕೋಶೀಯ ವಿಜ್ಞಾನ, ತರುವಾಯದ ವರ್ಷಗಳಲ್ಲಿ ಸಾಧಿತವಾದ ಹೊಸ ತಂತ್ರಗಳ ನೆರವಿನಿಂದ (ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕ ಹಾಗೂ ಜೀವರಸಾಯನ ಹೊಸ ತಂತ್ರಗಳ ನೆರವಿನಿಂದ (ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಹಾಗೂ ಜೀವರಸಾಯನ ವಿಜ್ಞಾನದ ಸಲಕರಣೆಗಳು) ಮೂಲಭೂತ ಜೀವಪ್ರಕ್ರಿಯೆಗಳ ಆಣವಿಕ ಶೋಧನೆಯನ್ನು ಕುರಿತಂಥ ಕ್ರಿಯಾತ್ಮಕ ವಿಚಾರಣೆಯಾಗಿ ಪರಿವರ್ತನೆಗೊಂಡಿದೆ.

ಕೋಶದ ನ್ಯೂಕ್ಲಿಯಸ್, ಕ್ರೋಮೊಸೋಮುಗಳು ಮುಂತಾದ ಅಂಗಕಗಳ ಅಧ್ಯಯನ ಮಾತ್ರವಲ್ಲದೆ ಪ್ರೋಟೀನ್, ನ್ಯೂಕ್ಲಿಯಿಕ್ ಆಮ್ಲಗಳು, ಮೇದಸ್ಸು, ಶರ್ಕರಗಳ ರಾಸಾಯನಿಕ ಹಾಗೂ ಆಣವಿಕ ಶೋಧನೆಗಳು ಈ ಉಪವಿಭಾಗದ ಪ್ರಮುಖ ಸಾಧನೆಗಳಾಗಿವೆ.

ಪರಿಸರ ವಿಜ್ಞಾನ : ಜೀವಜಗತ್ತಿನ ಮೂರು ಪ್ರಧಾನ ಗುಂಪುಗಳ, ಅಂದರೆ ಉತ್ಪಾದಕಗಳಾದ ಸಸ್ಯಗಳು, ಅನುಭೋಗಿಗಳಾದ ಪ್ರಾಣಿಗಳು ಹಾಗೂ ವಿಘಟನಕಾರಿಗಳಾದ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳು-ಇವುಗಳ ಅಂತರವರ್ತನೆಯೂ ಜೀವಿಗಳು ಮತ್ತು ನಿರ್ಜೀವ ವಸ್ತುಗಳ ನಡುವೆ ಕಾಣಬರುವ ವಸ್ತುವಿನಿಮಯವೂ ಸಸ್ಯಪ್ರಾಣಿ ಬ್ಯಾಕ್ಟೀರಿಯಗಳ ಸಹಜ ಸಮೂಹದ ಮೂಲಕ ಶಕ್ತಿ ಮತ್ತು ವಸ್ತುಗಳ ಹರಿವೂ ಪರಿಸರ ವಿಜ್ಞಾನದ ಅಧ್ಯಯನ ವಿಷಯ. ಈ ಮೂರು ಜೀವಿಗಳ ಸಮೂಹಕ್ಕೆ ಒಟ್ಟಾರೆಯಾಗಿ ಪರಿಸರೀಯ ವ್ಯವಸ್ಥೆ (ಈಕೊಸಿಸ್ಟಮ್) ಎಂದು ಹೆಸರು.

ಪ್ರಾಣಿಸ್ವಭಾವ ವಿಜ್ಞಾನ: ಪ್ರಾಣಿಗಳ ನಡತೆ, ಸ್ವಭಾವ ಕುರಿತ ಈ ಅಧ್ಯಯನ ತೀರ ಇತ್ತೀಚಿನದು; 20ನೆಯ ಶತಮಾನದ್ದು. ಇದು ಸಹಜವಾಗಿಯೇ ಪ್ರಾಣಿಗಳಿಗೆ ಮಾತ್ರ ಸೀಮಿತವಾದ ವ್ಯಾವರ್ತಕ ವಿಷಯ. ಪ್ರಾಣಿಗಳ ಗ್ರಹಣ ಸಾಮಥ್ರ್ಯ, ಸಂಯೋಜನೆ, ಸ್ಥಾನನಿರ್ಧರಣ, ಕಲಿಕೆ, ನೆನಪಿನಸಾಮಥ್ರ್ಯ ಮುಂತಾದ ವೈಯಕ್ತಿಕ ಭೌದ್ಧಿಕ ವಿಷಯಗಳಿಂದ ಹಿಡಿದು ಸಂಪರ್ಕ, ಸಾಮಾಜಿಕ ವರ್ತನೆ ಮುಂತಾದ ಸಮೂಹ ವಿಚಾರಗಳ ವರೆಗೆ ಇದರಲ್ಲಿ ಅಧ್ಯಯಿಸಲಾಗುತ್ತದೆ.

ಇವೆಲ್ಲ ಆಧುನಿಕಸಾಧನೆಗಳ ಫಲವಾಗಿ ಪ್ರಾಣಿವಿಜ್ಞಾನ ಇಂದು ಪ್ರಾಣಿಜೀವ ವಿಜ್ಞಾನವಾಗಿದೆ. ಎಲ್ಲ ಜೀವಿಗಳೂ ಒಂದೇ ಎಂಬುದೇ ಇದರ ಮೂಲಾಧಾರ.
ಪ್ರಾಣಿವಿಜ್ಞಾನದ ಸಂಶೋಧನೆಯ ತಂತ್ರಗಳು, ಕಾರ್ಯವಿಧಾನಗಳು : ಪ್ರಾಣಿಗಳ ಸಂಶೋಧನೆಗೆ ಬಳಸಲಾಗುವ ತಂತ್ರಗಳು, ಸಲಕರಣೆಗಳು ವೈವಿಧ್ಯಮಯ. ಸೂಕ್ಷ್ಮದರ್ಶಕಗಳ (ದೃಕ್ಸೂಕ್ಷ್ಮದರ್ಶಕ ಹಾಗೂ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ) ಬಳಕೆ ಎಲ್ಲರಿಗೂ ತಿಳಿದದ್ದೇ. ಕೋಶೀಯ ವ್ಯವಸ್ಥೆಗಳ ಘಟಕಗಳ ಅಧ್ಯಯನಕ್ಕೆ ಪೃಥಕ್ಕರಣ ಹಾಗೂ ಶುದ್ಧೀಕರಣ ವಿಧಾನಗಳು ಅತ್ಯಗತ್ಯ. ಜೀವರಾಸಾಯನಿಕ ಅಭ್ಯಾಸಗಳಿಗೆ ವಿಶೇಷವಾಗಿ ಬಳಕೆಯಲ್ಲಿರುವ ತಂತ್ರವೆಂದರೆ ವಿಕಿರಣಪಟು ಸಂಯುಕ್ತಗಳ ಬಳಕೆ. ಇದರಿಂದ ಉಪಾಪಚಯ ಪಥಗಳ ಅಭ್ಯಾಸ ಸುಲಭವಾಗಿದೆ. ಕಿಣ್ವನಿಯಂತ್ರಕ ಪ್ರತಿಕ್ರಿಯೆಗಳ ದರವನ್ನು ಅಳೆಯಲೂ ಸಂಖ್ಯಾಕಲನಾತ್ಮಕ ರೀತ್ಯ ವಿಶ್ಲೇಷಣೆ ನಡೆಸಲೂ ಪ್ರಾಣಿವಿಜ್ಞಾನದಲ್ಲಿ ಇತ್ತೀಚೆಗೆ ಕಂಪ್ಯೂಟರ್ ಬಳಕೆಯೂ ಆರಂಭವಾಗಿದೆ.

ಪ್ರಾಣಿವಿಜ್ಞಾನದಲ್ಲಿ ಇಂದು ಸಾಧಿಸಲಾಗಿರುವ ಪ್ರಗತಿಪರ ಸಾಧನೆಗಳಿಂದಾಗಿ ಉದಾಹರಣೆಗೆ, ಆಯ್ದ ತಳೀಕರಣ, ಪ್ರಾಣಿಪೋಷಣೆಯ ಉತ್ತಮಿಕೆ ಮುಂತಾದವು ಪ್ರಾಣಿಜನ್ಯ ಆಹಾರೋತ್ಪಾದನೆ (ಮಾಂಸ, ಹಾಲು, ಹೈನು, ಮೀನುಗಾರಿಕೆ), ಚರ್ಮ, ತುಪ್ಪುಳು, ಉಣ್ಣೆ, ಸಾವಯವ ಗೊಬ್ಬರಗಳು ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ. ಈ ಅಧ್ಯಯನಗಳು ಆನ್ವಿಕ ಪ್ರಾಣಿವಿಜ್ಞಾನದ ಪ್ರಕಾರಗಳಾಗಿ ರೂಪುತಳೆದಿವೆ. 							 
 											  (ಬಿ.ಟಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ